ತಕ್ಷಕ
	ಇಪ್ಪತ್ತೇಳು ನಾಗಕುಲಗಳ ರಾಜ. ಕಶ್ಯಪಮುನಿಯಿಂದ ಕದ್ರುವಿನಲ್ಲಿ ಜನಿಸಿದವ. ಶತ್ರುಸೇನ, ಅಶ್ವಸೇನರು ಈತನ ಮಕ್ಕಳು. ಉತ್ತಂಕ ಮಹರ್ಷಿ ಗುರುದಕ್ಷಿಣೆಗಾಗಿ ಪೌಷ್ಯ ಮಹಾರಾಜನ ಹೆಂಡತಿಯ ಕುಂಡಲಗಳನ್ನು ಬೇಡಿ ತರುತ್ತಿದ್ದಾಗ ತಕ್ಷಕ ಕ್ಷಪಣಕನ ವೇಷದಿಂದ ಬಂದು ಅವನ್ನು ಅಪಹರಿಸಿ ಸರ್ಪವಾಗಿ ನಾಗಲೋಕ ಸೇರಿದ. ಹಿಂಬಾಲಿಸಿ ಬಂದ ಉತ್ತಂಕ ಬಿಲವನ್ನು ಅಗೆಯತೊಡಗಲು ಇಂದ್ರನ ಅನುಗ್ರಹದಿಂದ ಆತನ ದಂಡಕ್ಕೆ ವಜ್ರಾಯುಧದ ಶಕ್ತಿ ಬಂದಿತಾಗಿ ಸುಲಭವಾಗಿ ನಾಗಲೋಕ ಸೇರಿದ. ಇಂದ್ರನ ಸೂಚನೆಯಂತೆ ತಾನು ಏರಿ ಬಂದ ಕುದುರೆಯ ಪೃಷ್ಠ ಭಾಗವ್ನನೂದಲು ಆ ಕುದುರೆಯ ರೋಮರಂಧ್ರಗಳಿಂದ ಹೊರಟ ಅಗ್ನಿಜ್ವಾಲೆ ನಾಗಲೋಕವನ್ನು ಸುಡತೊಡಗಲು ತಕ್ಷಕ ಉತ್ತಂಕನಿಗೆ ಶರಣುಬಂದು ಕುಂಡಲಗಳನ್ನೊಪ್ಪಿಸಿದ. 

	ಸರ್ಪದಷ್ಟನಾಗಿ ಸಾಯುವಂತೆ ಋಷಿಯೊಬ್ಬನಿಂದ ಶಾಪ ಪಡೆದ ಪರೀಕ್ಷಿತ ಮಹಾರಾಜನನ್ನು ಉಳಿಸಲು ಹೋಗುತ್ತಿದ್ದ ಕಶ್ಯಪನೆಂಬ ಬ್ರಾಹ್ಮಣನನ್ನು ತಕ್ಷಕ ದಾರಿಯಲ್ಲಿ ಸಂಧಿಸಿ ಆತನ ಶಕ್ತಿಯನ್ನು ಪರೀಕ್ಷಿಸಲು ತನ್ನ ವಿಷದಿಂದ ಆಲದ ಮರವನ್ನು ಸುಟ್ಟುಹಾಕಿದ. ಕಶ್ಯಪ ಮಂತ್ರಶಕ್ತಿಯಿಂದ ಆ ಮರವನ್ನು ಚಿಗುರಿಸಿದಾಗ ತಕ್ಷಕ ಆತನನ್ನು ಸನ್ಮಾನಿಸಿ ಹಿಂದೆ ಕಳಿಸಿ, ಪರೀಕ್ಷಿತ್ ರಾಜನನ್ನು ಕಚ್ಚಿಕೊಂದ. ಹಳೆಯ ದ್ವೇಷವನ್ನು ಮರೆಯದ ಉತ್ತಂಕ ಪ್ರೇರೇಪಿಸಲಾಗಿ ಪರೀಕ್ಷಿತನ ಪುತ್ರ ಜನಮೇಜಯ ತಂದೆಯ ಮರಣಕ್ಕೆ ಸೇಡು ತೀರಿಸಿಕೊಳ್ಳಲು ಸರ್ಪಯಾಗ ಮಾಡಿ ಹದಿನೆಂಟು ನಾಗಕುಲಗಳನ್ನು ನಾಶಪಡಿಸಿದ. ಆಗ ಆಸ್ತಿಕನ ಪ್ರಭಾವದಿಂದ ತಕ್ಷಕ ಉಳಿದುಕೊಂಡ. ಹಿಂದೆ ಖಾಂಡವವನ ದಹನಕಾಲದಲ್ಲಿ ಈತ ಕುರುಕ್ಷೇತ್ರದಲ್ಲಿದ್ದುದರಿಂದ ಬದುಕಿಕೊಂಡಿದ್ದ. 

	ಸೂರ್ಯವಂಶದ ಪ್ರಸೇನಜಿತನೆಂಬ ರಾಜರ್ಷಿಯ ಮಗನ ಹೆಸರೂ ತಕ್ಷಕ. ಈತನ ಮಗ ಬೃಹದ್ಬಲ ಭಾರತ ಯುದ್ಧದಲ್ಲಿ ದುರ್ಯೋಧನನ ಪರವಾಗಿ ಹೋರಾಡಿ ಅಭಿಮನ್ಯುವಿನಿಂದ ಹತನಾದ. ಈ ಉಲ್ಲೇಖನಗಳನ್ನು ಮಹಾಭಾರತ ಹಾಗೂ ದೇವಿ ಭಾಗವತಗಳಲ್ಲಿ ಕಾಣಬಹುದು. 
(ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ